022ಲಿಂಗರಾಜೇಂದ್ರ 2 

ಕೊಡಗಿನಲ್ಲಿ ಆಳಿದ ಹಾಲೇರಿ ವಂಶದ ಅರಸು (1811-20). ಒಂದನೆಯ ಲಿಂಗರಾಜನ ಎರಡನೆಯ ಮಗ.  ಒಂದನೆಯ ಲಿಂಗರಾಜನ ಮರಣಾನಂತರ ಹೈದರ್ ಮತ್ತು ಟಿಪ್ಪು, ಇವನು ಮತ್ತು ಇವನ ಅಣ್ಣ ವೀರರಾಜೇಂದ್ರರನ್ನು ಆರಂಭದಲ್ಲಿ ಗೊರೂರಿನಲ್ಲೂ ಮುಂದೆ ಪಿರಿಯಾಪಟ್ಟಣದಲ್ಲೂ ಸೆರೆಯಲ್ಲಿಟ್ಟಿದ್ದರು.  ವೀರರಾಜೇಂದ್ರ 1788ರಲ್ಲಿ ಬಹಳ ಧೀರತನದಿಂದ ಯತ್ನಿಸಿ ಕೊಡಗಿನ ಸ್ವಾತಂತ್ರ್ಯವನ್ನು ಮತ್ತೆ ಪಡೆದ. ಆದರೆ 1793ರಲ್ಲಿ ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ಅವರಿಗೆ ಕಪ್ಪ ಕೊಡಲು ಒಪ್ಪಿಕೊಂಡ.  1809ರಲ್ಲಿ ವೀರರಾಜೇಂದ್ರ ಮರಣ ಹೊಂದಿ ಅವನ ಮಗಳಾದ ದೇವಮ್ಮಾಜಿಗೆ ಪಟ್ಟವಾದರೂ ಲಿಂಗರಾಜೇಂದ್ರ ಉಪಾಯದಿಂದ ಅವಳಿಂದ ರಾಜ್ಯಾಧಿಕಾರವನ್ನು ಕಸಿದುಕೊಂಡು 1811ರಲ್ಲಿ ತಾನೇ ರಾಜನಾದ. ಇವನು 1820ರಲ್ಲಿ ನಿಧನನಾದ ಅನಂತರ ಇವನ ಮಗ ಎರಡನೆಯ ವೀರರಾಜನಿಗೆ ಪಟ್ಟವಾಯಿತು.

ಲಿಂಗರಾಜೇಂದ್ರ ಪಟ್ಟಕ್ಕೆ ಬಂದ ಅನಂತರ ಆಡಳಿತ ಸಂಬಂಧವಾಗಿ ಇವನು ಹೊರಡಿಸಿದ ಹುಕುಂ ನಾಮೆಯಲ್ಲಿರುವ 52 ಆಜ್ಞೆಗಳು ಒಬ್ಬ ತಜ್ಞ ಆಡಳಿತಗಾರನ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತವೆ.  ಅರಮನೆಯ ಕೇಂದ್ರ ಕಚೇರಿಯ ನೌಕರರಿಗೆ, ನಾಡುಗಳ ಅಧಿಕಾರಿಗಳಿಗೆ, ಶಾನು ಭೋಗರಿಗೆ, ಕಂದಾಯ ವಸೂಲಿ ಸಂಬಂಧ ಮುಂತಾಗಿ ಇವನು ನೀಡಿದ ಸೂಚನೆಗಳು ಮನನೀಯವಾಗಿವೆ. ಭೂಮಿಯ ಉತ್ಪನ್ನದ ಹತ್ತನೆಯ ಒಂದಂಶವನ್ನಷ್ಟೇ ಇವನು ಕಂದಾಯವಾಗಿ ಸಂಗ್ರಹಿಸುತ್ತಿದ್ದ.  ಕಂದಾಯವನ್ನು ವರ್ಷಕ್ಕೆ ನಾಲ್ಕು ಕಂತುಗಳಲ್ಲಿ ಸಲ್ಲಿಸಲು ಅವಕಾಶವಿತ್ತಲ್ಲದೆ ಕಂದಾಯ ಸಂದ ಬಗ್ಗೆ ರಶೀತಿ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ನೀಡಿದ್ದ. ಈ ಹುಕುಂಗಳಲ್ಲಿ ನ್ಯಾಯ ತೀರ್ಮಾನ, ಜಾತಿಕಟ್ಟಳೆ ಗಳ ರಕ್ಷಣೆ, ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದ ಸೂಚನೆಗಳೂ ಇವೆ.  ರಾಜ್ಯದ ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸಲು ಬೈರಾಮಜಿ ಎಂಬ ಪಾರಸೀ ವರ್ತಕನನ್ನು ಇಟ್ಟುಕೊಂಡಿದ್ದು, ಅವನ ನೆರವಿನಿಂದ ವಾಣಿಜ್ಯಾ ದಾಯವನ್ನು ಲಿಂಗರಾಜ ಹೆಚ್ಚಿಸಿಕೊಂಡಿದ್ದ.
ವಂಚನೆಯಿಂದ ಅಧಿಕಾರ ಪಡೆದಿದ್ದ ಲಿಂಗರಾಜೇಂದ್ರ ತನ್ನ ರಾಜ್ಯದೊಳಗಿನ ಯಾವುದೇ ಸುದ್ದಿ ಕಂಪನಿಗೆ ಮುಟ್ಟಬಾರದೆಂದು ಬಹಳ ಎಚ್ಚರ ವಹಿಸಿ, ಭಾರಿ ಬಂದೋಬಸ್ತನ್ನು ಇಟ್ಟಿದ್ದ. ಆಫ್ರಿಕದ ಸಿದ್ದಿಗಳನ್ನು ತನ್ನ ಅಂಗರಕ್ಷಕರಾಗಿ ಇಟ್ಟುಕೊಂಡು ತನಗೆ ಕೇಡು ಬಗೆಯುವವರೆಂದು ಕಂಡು ಬಂದ ಅನೇಕ ಜನರ ಕೊಲೆ ಮಾಡಿಸಿದ್ದ. ಹೀಗಿದ್ದರೂ ಇವನ ಕಾಲದಲ್ಲಿ ಒಳ್ಳೆಯ ಯುದ್ಧಮುಕ್ತ ಶಾಂತಿಯ ವಾತಾವರಣ, ಸಂಪತ್ತು ಸಮೃದ್ಧಿಗಳು ಕೊಡಗಿಗೆ ಲಭಿಸಿದವು.

ಇವನು ಚತುರ ಗುರಿಕಾರನೂ ಒಳ್ಳೆಯ ಬೇಟೆಗಾರನೂ ದಂಡಾಳೂ ಆಗಿದ್ದು ಇವನ ಕ್ರೀಡಾಕೌಶಲಗಳನ್ನು ಅನೇಕ ಆಂಗ್ಲ ಸಂದರ್ಶಕರು ಹೊಗಳಿದ್ದಾರೆ. ನಿಜಗುಣಶಿವಯೋಗಿಯ ವಿವೇಕ ಚಿಂತಾಮಣಿಯನ್ನು ಇವನು ಸಂಸ್ಕøತ ಭಾಷೆಗೆ ಭಾಷಾಂತರಿಸಿದನೆಂದು ಹೇಳಲಾಗುತ್ತದೆ.  ಕನ್ನಡದಲ್ಲಿ ಇವನು ಕವಿತೆಗಳನ್ನು ರಚಿಸಿದ್ದಾನೆ. ಇವನು 1812ರಲ್ಲಿ ಮಡಿಕೇರಿಯ ಅರಮನೆಯನ್ನು ಕಟ್ಟಿಸಿದ. ಇದಲ್ಲದೆ ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಾಲಯವನ್ನೂ ಇವನೇ ಕಟ್ಟಸಿದ (1820).
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ